Tuesday, 20 November 2018

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ..
ಎದೆಯ ಕನಸು ಬತ್ತಿ ಹೋಗಿದೆ...
ಮನೆಯ ತುಂಬಾ ದೀಪಗಳ ಸಾಲು...
ದೀಪಾವಳಿಯ ಸಂಭ್ರಮ ಜಗಕ್ಕೆ
ನನ್ನ ಕಳೆದು ಕೊಂಡ ದುಃಖದ ಮೊಗೆ ಆಕೆಗೆ

ಬದುಕಿನ ದೀವಿಟಿಗೆ ದೀಪ ಹಚ್ಚುವುದ...
ಕಾಯಕದಲ್ಲೇ ಆಕೆಗೆ ಸಂಭ್ರಮ...
ಸುತ್ತೆಲ್ಲ ದೀಪ ಹಚ್ಚಿ... ಮನೆ ಬೆಳಗಿಸುವವರೇ...
ಆಕೆಗೆ ಕತ್ತಲೆಯಲ್ಲಾದರೂ ಹೊಸ ಕನಸು
ಕಾಣುವ ಹುಮ್ಮಸ್ಸು...
ಕತ್ತೆಲೆಯನ್ನ ಓಡಿಸುವ ಹುಮ್ಮಸ್ಸು ಜಗತ್ತಿಗೆ..
ಜಗಜಗಮಿಸುವ ಸುತ್ತೆಲ್ಲದರ ಮಧ್ಯೆ ಮರೆಯುತ್ತದೆ...
ನಾನು ಎಂಬ ಅಹಂಕಾರ...
ಮಧ್ಯೆ ಇದೆ ದುಡ್ಡೆಂಬ ದೊಡ್ಡಣ್ಣ...
ಕುಣಿಯುತ್ತಾಳೆ ಕತ್ತಲ್ಲಲ್ಲಿ ಆಕೆ
ಮನಸ್ಸಿನ ದುಗುಡ ಕಳೆಯಲು...
ಕತ್ತಲನ್ನ ನಿವಾರಿಸಿ, ಹೊಸತನ್ನ ...
ಬೆಳೆಸುವ ಹಪಹಪಿ ಬೆಳಕಿನ ಪ್ರಪಂಚಕ್ಕೆ...

'ಕತ್ತಲಿಂದ ಬೆಳಕಿನವರೆಗೆ' ನಮ್ಮ ನೆಡೆ ..
ವಿದ್ಯೆ ಅದಕ್ಕೆ ಪೂರಕ...
ಕಳೆದು ಹೋಗುತ್ತಿದೆ ಕತ್ತಲು....
ಕತ್ತಲಲ್ಲಿ ಕಾಡುವ ಭಾವ, ಕನಸುಗಳೂ...
ಬೆಳಕಿಗೆ ಮಾತ್ರ ಸ್ಥಾನವಾದರೆ ...
ನಿರಾಳವಾಗುವ ಕತ್ತಲೇ ಇಲ್ಲವಾದರೆ...
ಮನುಷ್ಯ...ಮನುಷ್ಯತ್ವಗಳನ್ನ ಎಲ್ಲಿ ಹುಡುಕಲಿ...
ವರ್ಷಕ್ಕೊಮ್ಮೆ ಬರುವ ದೀಪಾವಳಿಯ
ಸಂಭ್ರಮಕ್ಕಾದರೂ ಕತ್ತಲನ್ನ ನಮ್ಮಲ್ಲಿ ಬೆಳೆಯಕೊಡಣವೇ????

ರಶ್ಮಿ ಕುಂದಾಪುರ

Thursday, 1 November 2018

ಕನ್ನಡ ರಾಜ್ಯೋತ್ಸವ 2018 ಭಾಗ-೧

ಕನ್ನಡ ರಾಜ್ಯೋತ್ಸವದ ಆರಂಭದಲ್ಲೇ ಒಂದಷ್ಟು ಬರೀಬೇಕು ಅಂತ ಅನ್ನಿಸಿದ್ದು...
ಒಂದು ಪುಟ್ಟ ಕನ್ನಡದ ಹುಡುಗಿ ತನ್ನ ಅಪ್ಪ ಅಮ್ಮನೊಡನೆ ಇಂಗ್ಲಿಷ್ ನಲ್ಲೇ ವ್ಯವಹರಿಸಿದ್ದ ಕಂಡು...
ಕನ್ನಡದ್ದೇ ಕಂಪು ಅಂದುಕೊಂಡ ನನ್ನೂರಿನ ಇನ್ನೊಂದು 20 ವರ್ಷದ ಹುಡುಗಿ ಇವತ್ತು ಪೇಟೆಯವಳಾಗಿ, ಮನೆಯ ಒಳೆಗೆ ಇಂಗ್ಲಿಷ್ ತಂದ ಬಗೆಯನ್ನ ಕಂಡು...
ನಾನು ಕೆಲಸ ಮಾಡುವ ಕಡೆ ಕನ್ನಡದವರೇ ಅಂದುಕೊಂಡವರೂ, ಕನ್ನಡ ಹೆಮ್ಮೆ ಎಂದುಕೊಂಡವರೂ ಒಂದು ಪೂರ್ತ ವಾಕ್ಯವನ್ನ ಇಂಗ್ಲಿಷ್ ಇಲ್ಲದೆ ಮಾತನಾಡಲಾಗದೇ ಹೋದದ್ದನ್ನ ಕಂಡು....
ಯಾವುದೇ ಸಭೆ ಸಮಾರಂಭಕ್ಕೆ ಹೋದರೂ ಕನ್ನಡ ಗುತ್ತಿಗೆ ಪಡೆದ ಕನ್ನಡ ಶಾಲೆ ಮಾಷ್ಟ್ರಗಳನ್ನ ಬಿಟ್ಟು ಬೇರಾರಿಗೂ ಒಂದಷ್ಟು ಹೊತ್ತು ಶುದ್ಧ ಕನ್ನಡ ಮಾತನಾಡಲಾಗದ್ದು ಕಂಡಾಗ‌...

ಬೇಸರವಾಗುತ್ತೆ.....ಮಣ್ಣಿನ ಸಂಸ್ಕೃತಿ ಉಳಿಯಬೆಕಾದರೆ ಮಣ್ಣಿನ ಭಾಷೆ ಉಳಿಯಬೇಕಲ್ಲ.. ಸಂಹನೆಯ ಮಾಧ್ಯಮವೇ ಬದಲಾದರೆ ಯೋಚಿಸುವ ಆಂತರ್ಯದಲ್ಲಿ ಕನ್ನಡತನ...ಮಣ್ಣಿನ ಸಂಸ್ಕೃತಿ ಉಳಿದೀತೇ?? ಯಾಕೆ ಉಳಿಸಬೇಕು?? ನಿಜ....ನಾನೇನು ಶುಧ್ಧ ಸಂಸ್ಕೃತಿ ಹರಿಕಾರಳಲ್ಲ... ಗೌರಮ್ಮನಂತೆ ಹಿಂದಿನದ್ದನ್ನೇಲ್ಲಾ ಪಾಲಿಸುತ್ತಾ ಸೀರೆ, ಭರತನಾಟ್ಯ ಸನಾತನ ಧರ್ಮ ಅಂತೆಲ್ಲ ಪಟ್ಟಾಗಿ ಪಾಲಿಸುವವಳಲ್ಲ... ಬದಲಾವಣೆ ನೆಲದ ಯಾವತ್ತೂ ಸತ್ಯ ಅಂತ ತಿಳಿದವಳು... ಆದರೆ, ಭಾಷೆಯ ಜೊತೆ ನಮ್ಮೊಳಗಿನ ನಮ್ಮತನವನ್ನ ಪೂರ್ತಿಯಾಗಿ ಮಾರಿಬಿಟ್ಟರೆ...ನಮ್ಮ ಮುಂದಿನ ಜನಾಂಗವಿಡೀ ಗೊಂದಲದಲ್ಲಿ ತಬ್ಬಲಿತನದಲ್ಲಿ...ತನ್ನನ್ನ ತಾನು ಕಳೆದುಕೊಂಡದ್ದರಲ್ಲಿ ಕಳೆಯುವುದಿಲ್ಲವೇ??? ಇದು ನನಗೆ ಸಂಕಟ ಉಂಟುಮಾಡುತ್ತದೆ... ಸಂಸ್ಕೃತಿ...ತನ್ನತನ ಇವೆಲ್ಲಾ ಮನುಷ್ಯನಿಗೆ ತಾನು ತನ್ನದು ಅನ್ನುವ ಸುಖ ಕೊಡುವುದಂತೂ ನಿಜ ತಾನೇ!!... ಅದೇ ಇಲ್ಲ ನಾವು ಯಡಬಿಡಂಗಿಗಳಾದೆವು ಎಂದರೆ ಮಕ್ಕಳು ನಾಳೆ ಅಸಾಯಕತೆಯಿಂದ...ತಳಮಳದಿಂದ ಇಡೀ ಜೀವನ ಕಳೆಯುವ ಪರಿಸ್ಥಿತಿಗೆ ನಾವೇ ದೂಡುತ್ತಿದ್ದೇವೆ ಎಂದೆಣಿಸುತ್ತಿಲ್ಲವೇ????
ಇನ್ನೂ ಬರೆಲಿದೆ... ಇದು trailor ಅಷ್ಟೇ....

Tuesday, 9 October 2018

Holapu Mathu Kathalugala naduve 'ಹೊಳಪು ಮತ್ತು ಕತ್ತಲುಗಳ ನಡುವೆ"

ಕವಲುಗಳ ಮಧ್ಯೆ....ಬೆಳಕಿನ ಪಯಣ
ಬೆಳಕ ಅರಿಸುವ ಕಣ್ಣುಗಳೂ ಭಾರವಾಗಿದೆ....
ಹೆಣ್ಣಿನ ಕಣ್ಣದು...ದೂರ ತೀರಕ್ಕೇ ಮೀಸಲು
ಪಕ್ಕದ ನಲಿವು ತನ್ನದಾಗಿಸಲು... ಆಕೆಗೆ
ಇಲ್ಲವೇ ಸ್ವಾತಂತ್ರ್ಯ.. ಅದನ್ನ ಇಡೀಯಾಗಿ
ನುಂಗಲಿದೆ ಪಡೆದವನ ಹೆಗಲು...
ಆಕೆಯ ಹೆಗಲಿನ ಭಾರ.. ದೂರ ಹೋಗಲು ಬಿಡದು...
ಆದರೂ ದೂರದ ಆ ಬೆಳಕು ನನ್ನದೇ ಎಂಬ ಭಾವ...
ಆಸೆ ಹೆಣ್ಣಿನ ಇನ್ನೊಂದು ಮುಖ ತಾನೇ...
ತಾನು ನಲಿಯುತ್ತೇನೆ...ತನ್ನವನ ಬಾಹುಗಳಲ್ಲಿ,
ಹುದುಗಿ ನುಲಿಯುತ್ತೇನೆ... ಸುಖದ ಸೂರೆಯಲ್ಲಿ
ಮಿಂಚು, ಬೆಳಕನ್ನ ಮೈ ತುಂಬಿ ಕೊಳ್ಳುತ್ತೇನೆ...
ಅದಕ್ಕೇ ಪಡೆದವನಿಗೆ ಕಣ್ಣಂಚಲ್ಲಿ ಆಹ್ವಾನ......
ಅವನಲ್ಲಿ ಕರಗಿ ಹೋಗುವ ತವಕ,
ಬೆಳಕಿನ ಹೊಳಪನ್ನ ಮುಖದಲ್ಲಿ ತುಂಬಿಕೊಳ್ಳುತ್ತಾ
ಆದರೆ ಪಡೆದವ ಬಯಸುವುದು ಕತ್ತಲ ಕಪ್ಪನ್ನ....
ಸಂದಿಗಳ ಮಧ್ಯೆದ ಕಪ್ಪು ಆತನಿಗೆ ಮಿಂಚು...
ಬೇಡವಾದರೂ ಒಪ್ಪಿಸಿಕೊಳ್ಳಬೇಕು ...
ಕಪ್ಪು ಕತ್ತಲ್ಲಲ್ಲವೇ ಜೀವದ ಹುಟ್ಟು....!!
ಕತ್ತಲ್ಲಲ್ಲೇ ಕಣ್ಣಿನ ಮಿಂಚು, ಮುಖದ ಹೊಳಪು...
ಇದೆಲ್ಲದರ ಹುಡುಕಾಟ ಮುಚ್ಚಿದ ಕಣ್ಣುಗಳಿಂದ
ಆದರೆ ಆತನ ಮುಖದಲ್ಲೋ ಕರೀ ಕೂದಲು...
ಕತ್ತಲ್ಲಲ್ಲಿ ಬೋರ್ಗರೆಯುತ್ತಾ ಬುಸುಗುಡುವ ಆತನ
ಕಟ್ಟ ಕಡೆಯ ನಗುವಿನ ಆತುರ ಆಕೆಗೆ....
ಆ ನಗುವಿನಲ್ಲಿ ಬೆಳಕಿನ ಹುಟ್ಟನ್ನ ಕಾಣುವ ತವಕ
ಬೇಡವಾದ ಕತ್ತಲುಗಳ ಕಪ್ಪನ್ನ ಪ್ರೀತಿಸಲು...
ಉದಯಿಸುವ ಜೀವದ ಹೊಳಪಿನ,
ಕನಸೇ ಕಾರಣ.....ಅದು ತನ್ನದೂ ಎಂಬ ಭಾವ.
ಪಡೆದವನ ಮುಖದಲ್ಲಿ ಕಳೆದ ನಲಿವಿನ ಬೆಳಕು
ಅದಕ್ಕಲ್ಲವೇ ಆಕೆಗೆ ಕತ್ತಲ ಕಪ್ಪೂ ಆಪ್ತ....
ಕಾಣದ ಭಯ ಹಣೆಯ ಕಪ್ಪಿನಲ್ಲಿ ಕಂಡೂ ಕಾಣದಂತೆ,
ಸುಳಿದರೂ ಭಾರವಾದ ಕಣ್ಣಿನಲ್ಲಿ ಕವಲುಗಳ ಬೆಳಕು
ಕೆದರಿ ನಿಂತ ಕೂದಲುಗಳು ನಿನ್ನೆಯ ಕತ್ತಲನ್ನ ಮರೆತಿವೆ...
ಬೆಳಗಿನ ಬೆಳಕಿನೆಡೆಗೆ ನೆಡೆದು ಹೊರಡುತ್ತಾಳೆ ಆಕೆ...
ನಾಳೆಯ ಆಟದ್ದೇ ಕನಸು.... ಕಣ್ತುಂಬಾ ಅದರದ್ದೇ ನೋಟ.....

Wednesday, 27 June 2018

ಅವತ್ತು ಬದುಕು ಹುಟ್ಟಿತ್ತು....
ಇಲ್ಲ ಅವತ್ತೇ ಕನಸು ಸತ್ತಿದ್ದು...

ಕನಸುಗಳು ಇದ್ದಾಗ...
ನನ್ನ ಸುತ್ತೆಲ್ಲ ನೀನು..‌
ನಿನ್ನ ಘಮ...ಅದಿಲ್ಲದೆ ನಾನಿಲ್ಲ...
ಕನಸು ಕತ್ತಲಲ್ಲೂ ಇತ್ತು..
ಮನಸ್ಸ ತುಂಬಾ ಇದ್ದದ್ದು ಕನಸೇ.
ಕನಸಿನಲ್ಲಿ ಸುಲಭ ಕಣೋ...
ನಿನ್ನ ನೆನಪುಗಳಿದ್ದರೆ ಸೈ
ಅದೇ ಒಂದು ಅದ್ಭತ ಕನಸು
ಬದುಕ ಖುಷಿಯಲ್ಲಾ ಕನಸುಗಳಲ್ಲಿ
ಕನಸು ಹಾರುತ್ತದೆ...ಅದಕ್ಕಿಲ್ಲ ನಿಲುಗಡೆ
ಆ ನಿನ್ನ ನಗುವಿನ ಸುತ್ತಾ...
ನಿನ್ನ ಘಮದಲ್ಲಿ ಎಲ್ಲಾ....
ಕಳೆದು ಹೋಗುತ್ತೆ ಮನಸ್ಸು...
ಕನಸು ಸದಾ ಅನಂತ..ಕೊನೆಯಿಲ್ಲ ಅದಕ್ಕೆ,
ಮುಗಿಯಬೇಕೆಂಬ ತವಕವೂ ಇಲ್ಲ
ಕನಸುಗಳೆಲ್ಲ ಬಣ್ಣಬಣ್ಣ, ಹೊಸಹೊಸದು
ಕನಸಿನಲ್ಲಿರುವುದು ತೃಪ್ತಿ... ಸಂತಸ

ಬದುಕು ಹಾಗಲ್ಲ ಗೆಳೆಯಾ..
ವಾಸ್ತವದ ಸತ್ಯ..ಸುತ್ತೆಲ್ಲ ಕರಿನೆರಳು
ಬೇಕು ಅನ್ನುವುದರ ಹಂಬಲಕ್ಕೆ..
ಏನು ಎತ್ತ ಕಾಣದೆ ಬರೀ ಬೇಕೆನಿಸುವ ಸತ್ಯ
ಎಲ್ಲಿ ಏನೂ ಕಾಣಿಸದೆ ಸುತ್ತೆಲ್ಲ ಬೆಳಕು
ಬದುಕಿಗೆ ಕಾಲುಂಟು ಅದು ನಡೆಯುತ್ತದೆ
ನೋವಾದಾಗ ತೆವಳುತ್ತದೆ...
ಬದುಕಿನಲ್ಲಿ ಕಾಲ ಘಟ್ಟಗಳಿವೆ
ಮುಗಿಸಿ ಮುನ್ನೆಡೆಯಬೇಕು...
ನಾನು..ನೀನು ಅಂತಿಲ್ಲ
ಅದೊಂದು ಕರಿಸರ್ಪ, ಅದರದ್ದೇ ಹಾದಿ
ಬದುಕನ್ನ ಆಸ್ವಾದಿಸುವುದಲ್ಲ.. ಬದುಕುವುದು...
ಬದುಕಿನಲ್ಲಿ ಧೂಳಿದೆ, ಬೆವರಿದೆ
ಬಣ್ಣ ಎಂದೂ ಮಾಸಲುಗಳೇ ಅಲ್ಲಿ
ಅಲ್ಲಿ ನೀನಿಲ್ಲ...ನಾನಿಲ್ಲ...ಬರೀ ಕ್ಷಣಗಳು
ಘಮಗಳೆಲ್ಲ ನಿಂತು ಹೋದಾವೋ ಅನ್ನಿಸುವ,
ಒಂದೇ ಯಾಂತ್ರಿಕತೆಯ ವ್ಯವಸ್ಥೆ
ಬದುಕಿನಲ್ಲಿರುವುದು ಬರೀ
ಬದುಕಬೇಕೆಂಬ‌ ಹಪಹಪಿ...

ಬದುಕು ಕನಸಾಗಬೇಕು...ಕನಸು ಬದುಕಾಗಬೇಕು
ಕಾಯಬೇಕು ನಾನು ಮತ್ತೊಂದು ಹುಟ್ಟಿಗೆ

Tuesday, 12 June 2018

ಮಳೆಯ ಬದುಕು...ನೆನಪು..ಕನಸು‌.. (Maleya baduku...nenapu...kanasu)

ಮಳೆಯ ನೀರು...ನೀರುಗಳ ಮಧ್ಯೆ ನಾನು... ಅಲ್ಲೆಲ್ಲ  ಹುಡುಕಿದೆ... ಕಳೆದೇ ಹೋಯಿತಾ??!! ಕಣ್ಣು ತುಂಬಿ ಬಂತು‌‌‌ ಮಳೆಯ ಮಧ್ಯೆ ಕಣ್ಣೀರು ಕಾಣದಲ್ಲ....ಕೆನ್ನೆಯ ಪಕ್ಕದ ಬಿಸಿ ನೆನಪಿಸಿದ್ದು ಇದು ಮಳೆಯ ನೀರಲ್ಲ ಕಣ್ಣೀರು ಅಂತ.. ಕಣ್ಣು ಮಂಜಾದಾಗ ಕಣ್ಣೀರೋ ಇಲ್ಲ ಮಳೆ ನೀರೋ ತಿಳಿಯದ ಕ್ಷಣ.... ಮರಳು ಮರಳು ಕನಸುಗಳು..ಅವತ್ತಿಗೆ ಎಷ್ಟು ದಿನವಾಗಿತ್ತು ಕನಸು ಬಿದ್ದು? ಗೊತ್ತಿಲ್ಲ ಎಣಿಸಲು ದಿನಗಳು ತೆವಳುತ್ತಿದ್ದವು.... ಕಳೆದ ಕ್ಷಣಗಳ ಬಿಸುಪು ಮುಗಿದ ಮೇಲಲ್ಲವೇ ಬೆತ್ತಲಿನ ಚಳಿ... ಹಾಗೇ ಕನಸುಗಳ ಮಸುಕು ತೆರೆದ ಮೇಲಷ್ಟೇ ಕತ್ತಲಿನ ನಡುಕ.... ಇವತ್ತಿನ ಆವತ್ತು ಕಳೆದುಹೋದದ್ದು ಕನಸಾ??!! ಇಲ್ಲ ನೆನಪಿನ ಬುಗ್ಗೆಗಾಗಿ ಕಟ್ಟಿಟ್ಟುಕೊಂಡ ವಸ್ತುವಾ??!!...
       ಮಳೆಗೆ ಕನಸನ್ನ ಕೊಚ್ಚಿಕೊಂಡು ಹೋಗುವ ಶಕ್ತಿ ಇದೆ...ಅದೇ ಮಳೆ ಹೊಸ ಹುಟ್ಟಿಗೂ ಕಾರಣವಾಗುತ್ತದೆ... ಕಣ್ಣೀರಿನಿಂದ ತೊಯ್ದ ಹೃದಯ ಹೊಸ ಬೆಳಕಿಗೆ ದಾರಿ ಮಾಡೊಕೊಡುವುದೋ???!! ... ಇವತ್ತಿಗೆ ೧೪ ಮಳೆಗಾಲ ಕಳೆದಿತ್ತು...ಆದರೆ ಕಣ್ಣೀರಿನ ಬಿಸಿ ಇನ್ನೂ ನಿನ್ನೆ ಅನ್ನಿಸುವಷ್ಟು ಬಲವಾಗಿತ್ತು... ಕನಸುಗಳು ಹುಟ್ಟಲು ಹೆದರಿತ್ತೋ...ಇಲ್ಲ ಹುಟ್ಟಲೂ ಆಗದಷ್ಟು ಬಿಸಿ ಹೃದಯದಲ್ಲಿ ಇನ್ನೂ ಉಳಿದಿತ್ತೋ.... ಅಂತೂ ಕನಸುಗಳಿಗೆ ಹೊಸತನವಿಲ್ಲ, ಚೈತನ್ಯವಿಲ್ಲ... ಬಣ್ಣಗಳೂ ಇಲ್ಲ... ಮಳೆಯ ನೀರು ಮಾತ್ರ ನಿರಂತರ, ಅದಕ್ಕೆ ತನ್ನದೇ ಗುಂಗು... ತಪತಪನೆ ಹಿಂದೆಯಿಂದ, ಮುಂದೆಯಿಂದ...ಮೇಲಿಂದ ಬೀಳುವಾಗ ದೂರದಲ್ಲಿ ಬಿದ್ದರೆ ನೋಡಲು ಚಂದ... ಮೈ ಮೇಲೆ ಬಿದ್ದರೆ, ಮನದ ಆ ಹೊತ್ತಿನ ಬಾವದಂತೆ...ಖುಷಿ...ರೇಜಿಗ...ತಂಪು...ನಡುಕ....
       ಹೊಸ ಹುಟ್ಟು ಮಳೆಯಲ್ಲಿ...ಹಳೆ ನೆನಪು ಮಳೆಯಲ್ಲಿ... ಕಣ್ಣೀರ ಧಾರೆ ಮಳೆಯಲ್ಲಿ...ಕೌತುಕದ ಕಣ್ಣು ಮಳೆಯಲ್ಲಿ. ಜೀವನದಿಗೂ ಬೇಕು ಮಳೆ... ಋತುವಿನ ಅಂತರಕ್ಕೂ ಮಳೆಯೇ... ಬಿಸಿಲ ಬೇಗೆ ಮತ್ತು ತಣ್ಣನೆಯ ತಂಪಿನ ನಡುವೆ ಇರುವುದು ಬೋರೆಂದು ಸುರಿವ ಮಳೆ... ಆದರೂ ಮಳೆ ಕೆಲವೊಮ್ಮೆ ಕಿರಿಕಿರಿ.... ಬೇಕೆನಿಸುವ ಮಳೆ ರಾತ್ರಿಗಷ್ಟೇ ಸ್ಥೀಮಿತವಾಗಬಾರದೇ ಎಂಬ ಹರಕೆ..ರಾತ್ರಿಯ ಕತ್ತಲಲ್ಲಿ ಕರಗಿ ಹೋಗಲಿ...ಹಗಲಾದರೂ ನನ್ನದಾಗಲಿ ಎಂಬ ತವಕ.... ಹಗಲಲ್ಲಿ ಮಳೆ ಬಂದಾಗ ನೆನಪುಗಳು...ಮುನಿಸುಗಳು...ಕೊಚ್ಚಿಹೋಗತ್ತದೆ. ಗೊತ್ತು ನೆನಪುಗಳು ಕೊಚ್ಚಿಹೋದಾಗಷ್ಟೇ ಹೊಸ ಕನಸು ಮೂಡಲು ಸಾಧ್ಯ ಅಂತ....ಕನಸ ಆಸೆ ನೆನಪ ಆಸೆಯನ್ನ ಕೊಲ್ಲಲಾರದೆ???!...
       ಮಳೆಯ ಬದುಕು ಬೇಕೆನಗೆ... ಹೃದಯದ ಕಣ್ಣೀರ ಅಳಿಸಲು ...ಮೋಡಗಳು ಕಪ್ಪಾಗೋದು ಮನಸ್ಸಿನ ಕಹಿಯ ಹೀರಿನಾ???!! ಅಂತೂ ಮಳೆಗಾಲದಲ್ಲಿ ಕಾದ ಮನಸ್ಸಿಗೆ ತಂಪು...ನೆನಪಿನ ಮಳೆಯಿಂದನೋ... ಕನಸಿನ ಸ್ಪೋಟದಿಂದನೋ.... ಮಳೆಯ ಬದುಕು ಬೇಕೆನಗೆ....
   

Sunday, 25 February 2018

ಅನಂತದೆಡೆಗೆ...ಸತ್ಯದ ಶೋಧ (Anathadedege.....sathyada shodha)

ನನ್ನವರು ಯಾರೂ ಇಲ್ಲ
ಯಾರಿಗೆ ಯಾರೂ ಇಲ್ಲ
ಬದುಕಿನ ಬಂಡಿಯಲ್ಲಿ ನಮ್ಮದೇನೂ ಇಲ್ಲ
ನೀನಲ್ಲ ನಾನಲ್ಲ ಅವಳಲ್ಲ
ಎಲ್ಲರೂ ನನ್ನವರೆಂಬ ಸುಳ್ಳೇ ಪ್ರೀತಿ ನಮಗೆಲ್ಲ
ಅವನೆಡೆಯ ಪಯನಣಕ್ಕೆ ಜೊತೆಯಿಲ್ಲ
ಬೇಕೆಂಬ ಆಸೆಗೆ ಕೊನೆಯಿಲ್ಲ...

ಬದಕು ಕಂಡ ನನಸುಗಳಲ್ಲಿ
ನಮ್ಮವರಾದ ಮನಸ್ಸುಗಳು
ಅದೇ ಬದುಕಿನ ಕನಸುಗಳಲ್ಲಿ
ಕಾಣದಂತೆ ಕರಗಿತೋ ಏನೋ ಕಾಣೆ....
ಅವನು, ಅವಳು ಎಲ್ಲಾ ನಾನಾದ ಕ್ಷಣಗಳ
ಬದುಕು...ಹುಟ್ಟಿಗೇ ಎಲ್ಲಾ ಸತ್ಯದ ಸಾವು ಇಲ್ಲ
ಮತ್ತೆ ನಾನು ಅವನೆಡೆಗೆ ನಡೆಯುವುದೆಂತು
ಅನಂತದ ಆಶಯ ಎಲ್ಲಾದೀತು

ಕಾಣದಕಡಲಲ್ಲಿ ನನ್ನದು ಎಲ್ಲಿ...
ಬದುಕಿನ ಹಸಿರು ಉಸಿರಲ್ಲಿಲ್ಲದ ಅಬ್ಬರ
ಹುಟ್ಟಿಗೂ ಇಲ್ಲ...ನಾನೂ ನೀನೂ;
ಯಾವುದಕ್ಕೂ ಇಲ್ಲ ಜಾಗ ಇಲ್ಲಿ...
ಅದರಾಚೆಯ ಸದಾ ಸತ್ಯವಾದ ಸಾವು
ಸತ್ಯಕ್ಕಾಗಿ ಅದಾರಾಚೆಯ ಅನಂತ ಕಾಣಸಿಗುವುದಲ್ಲ
ಅನಂತದಲ್ಲೇ ಸೂರ್ಯನ ಹುಟ್ಟೂ ಸಾವೂ
ಬೆಳಕಿಗೆಗಾ ಸತ್ಯ...ಸತ್ಯಕ್ಕಾ ಬೆಳಕು?
ಹಾಗಾದರೆ ಸಾವಿಗೇಕೆ ಕಪ್ಪು!!??

Sunday, 14 January 2018

Kappu Belupugala naduve (ಕಪ್ಪು ಬಿಳುಪುಗಳ ನಡುವೆ)

ಕನಸುಗಳಿಗೆ ಬಣ್ಣವಿಲ್ಲ...
ಆದರೂ ಬಣ್ಣ ಬಣ್ಣದ ಕನಸುಗಳನ್ನ ಕಾಣುತ್ತೇವೆ...
ರಕ್ತ ದ ಬಣ್ಣ ಒಂದೇ ಆದರೂ....
ಸಾವಿರ ಬಣಗಳ ರಕ್ತಗಳನ್ನ ಬೇರೆಯಾಗಿಸುತ್ತೇವೆ
ಬಣ್ಣವಿರುವುದು ಮನಸಿನೊಳಗಣ ಕಸಿವಿಸಿಗಳಿಗೆ
ಬಣ್ಣವಿರುವುದು ನಾನೆಂಬ ಹಮ್ಮಿಗೆ...
ಕಾಣದ ಕನಸುಗಳಿಗೂ ಬಣ್ಣ ಹಚ್ಚಿ...
ಹರಿದುಹೋಗುವ ರಕ್ತವ ನೋಡುವ ಚಟ.....
ಕಾಣದ ಆಸೆಗಳಿಗೆ, ಅಹಂಗಾಗಿ...ಬಣ್ಣ ಕಾಣುವ ಹೃದಯದ್ದೇ ಕೊಲೆ
ಕಾಡವುದು ಮನಸೊ ಅದೊರಳಗಿನ ಕಳವಳವೊ...
ಬಣ್ಣಗಳ ಆಸೆಗೋ...ಅಥವಾ ನಾನೇ ಬಣ್ಣವಾಗುವ ಚಟಕ್ಕೋ
ಯಾವುದು ಬೇಕು ಜೀವಕ್ಕೆ??...
ಒಂದು ಚೆನ್ನಾದ ಕನಸು...ಮತ್ತೊಂದಷ್ಟು ನಿದ್ದೆ...
ಮತ್ತೆ ಬೇಕು ಹಿಟ್ಟು ಹೊಟ್ಟೆಗೆ... ಇಲ್ಲೆಲ್ಲಿದೆ ಬಣ್ಣ...
ಕಪ್ಪು ಬಿಳುಪಲ್ಲವೇ ಇದೆಲ್ಲ....
ಕಪ್ಪು ಬಿಳುಪಾಗುವುದು ಪ್ರತಿ ರಾತ್ರಿಯ ಕನಸು
ಬೆಳಕಲ್ಲಿ ಕಾಣದ ನೀರವತೆಗೆ ಬೇಕು ಅದೇ ಕಪ್ಪು...
ಇನ್ನು ಬಣ್ಣಗಳೇಕೆ ನಮಗೆ.... ???

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...