Wednesday, 27 June 2018

ಅವತ್ತು ಬದುಕು ಹುಟ್ಟಿತ್ತು....
ಇಲ್ಲ ಅವತ್ತೇ ಕನಸು ಸತ್ತಿದ್ದು...

ಕನಸುಗಳು ಇದ್ದಾಗ...
ನನ್ನ ಸುತ್ತೆಲ್ಲ ನೀನು..‌
ನಿನ್ನ ಘಮ...ಅದಿಲ್ಲದೆ ನಾನಿಲ್ಲ...
ಕನಸು ಕತ್ತಲಲ್ಲೂ ಇತ್ತು..
ಮನಸ್ಸ ತುಂಬಾ ಇದ್ದದ್ದು ಕನಸೇ.
ಕನಸಿನಲ್ಲಿ ಸುಲಭ ಕಣೋ...
ನಿನ್ನ ನೆನಪುಗಳಿದ್ದರೆ ಸೈ
ಅದೇ ಒಂದು ಅದ್ಭತ ಕನಸು
ಬದುಕ ಖುಷಿಯಲ್ಲಾ ಕನಸುಗಳಲ್ಲಿ
ಕನಸು ಹಾರುತ್ತದೆ...ಅದಕ್ಕಿಲ್ಲ ನಿಲುಗಡೆ
ಆ ನಿನ್ನ ನಗುವಿನ ಸುತ್ತಾ...
ನಿನ್ನ ಘಮದಲ್ಲಿ ಎಲ್ಲಾ....
ಕಳೆದು ಹೋಗುತ್ತೆ ಮನಸ್ಸು...
ಕನಸು ಸದಾ ಅನಂತ..ಕೊನೆಯಿಲ್ಲ ಅದಕ್ಕೆ,
ಮುಗಿಯಬೇಕೆಂಬ ತವಕವೂ ಇಲ್ಲ
ಕನಸುಗಳೆಲ್ಲ ಬಣ್ಣಬಣ್ಣ, ಹೊಸಹೊಸದು
ಕನಸಿನಲ್ಲಿರುವುದು ತೃಪ್ತಿ... ಸಂತಸ

ಬದುಕು ಹಾಗಲ್ಲ ಗೆಳೆಯಾ..
ವಾಸ್ತವದ ಸತ್ಯ..ಸುತ್ತೆಲ್ಲ ಕರಿನೆರಳು
ಬೇಕು ಅನ್ನುವುದರ ಹಂಬಲಕ್ಕೆ..
ಏನು ಎತ್ತ ಕಾಣದೆ ಬರೀ ಬೇಕೆನಿಸುವ ಸತ್ಯ
ಎಲ್ಲಿ ಏನೂ ಕಾಣಿಸದೆ ಸುತ್ತೆಲ್ಲ ಬೆಳಕು
ಬದುಕಿಗೆ ಕಾಲುಂಟು ಅದು ನಡೆಯುತ್ತದೆ
ನೋವಾದಾಗ ತೆವಳುತ್ತದೆ...
ಬದುಕಿನಲ್ಲಿ ಕಾಲ ಘಟ್ಟಗಳಿವೆ
ಮುಗಿಸಿ ಮುನ್ನೆಡೆಯಬೇಕು...
ನಾನು..ನೀನು ಅಂತಿಲ್ಲ
ಅದೊಂದು ಕರಿಸರ್ಪ, ಅದರದ್ದೇ ಹಾದಿ
ಬದುಕನ್ನ ಆಸ್ವಾದಿಸುವುದಲ್ಲ.. ಬದುಕುವುದು...
ಬದುಕಿನಲ್ಲಿ ಧೂಳಿದೆ, ಬೆವರಿದೆ
ಬಣ್ಣ ಎಂದೂ ಮಾಸಲುಗಳೇ ಅಲ್ಲಿ
ಅಲ್ಲಿ ನೀನಿಲ್ಲ...ನಾನಿಲ್ಲ...ಬರೀ ಕ್ಷಣಗಳು
ಘಮಗಳೆಲ್ಲ ನಿಂತು ಹೋದಾವೋ ಅನ್ನಿಸುವ,
ಒಂದೇ ಯಾಂತ್ರಿಕತೆಯ ವ್ಯವಸ್ಥೆ
ಬದುಕಿನಲ್ಲಿರುವುದು ಬರೀ
ಬದುಕಬೇಕೆಂಬ‌ ಹಪಹಪಿ...

ಬದುಕು ಕನಸಾಗಬೇಕು...ಕನಸು ಬದುಕಾಗಬೇಕು
ಕಾಯಬೇಕು ನಾನು ಮತ್ತೊಂದು ಹುಟ್ಟಿಗೆ

Tuesday, 12 June 2018

ಮಳೆಯ ಬದುಕು...ನೆನಪು..ಕನಸು‌.. (Maleya baduku...nenapu...kanasu)

ಮಳೆಯ ನೀರು...ನೀರುಗಳ ಮಧ್ಯೆ ನಾನು... ಅಲ್ಲೆಲ್ಲ  ಹುಡುಕಿದೆ... ಕಳೆದೇ ಹೋಯಿತಾ??!! ಕಣ್ಣು ತುಂಬಿ ಬಂತು‌‌‌ ಮಳೆಯ ಮಧ್ಯೆ ಕಣ್ಣೀರು ಕಾಣದಲ್ಲ....ಕೆನ್ನೆಯ ಪಕ್ಕದ ಬಿಸಿ ನೆನಪಿಸಿದ್ದು ಇದು ಮಳೆಯ ನೀರಲ್ಲ ಕಣ್ಣೀರು ಅಂತ.. ಕಣ್ಣು ಮಂಜಾದಾಗ ಕಣ್ಣೀರೋ ಇಲ್ಲ ಮಳೆ ನೀರೋ ತಿಳಿಯದ ಕ್ಷಣ.... ಮರಳು ಮರಳು ಕನಸುಗಳು..ಅವತ್ತಿಗೆ ಎಷ್ಟು ದಿನವಾಗಿತ್ತು ಕನಸು ಬಿದ್ದು? ಗೊತ್ತಿಲ್ಲ ಎಣಿಸಲು ದಿನಗಳು ತೆವಳುತ್ತಿದ್ದವು.... ಕಳೆದ ಕ್ಷಣಗಳ ಬಿಸುಪು ಮುಗಿದ ಮೇಲಲ್ಲವೇ ಬೆತ್ತಲಿನ ಚಳಿ... ಹಾಗೇ ಕನಸುಗಳ ಮಸುಕು ತೆರೆದ ಮೇಲಷ್ಟೇ ಕತ್ತಲಿನ ನಡುಕ.... ಇವತ್ತಿನ ಆವತ್ತು ಕಳೆದುಹೋದದ್ದು ಕನಸಾ??!! ಇಲ್ಲ ನೆನಪಿನ ಬುಗ್ಗೆಗಾಗಿ ಕಟ್ಟಿಟ್ಟುಕೊಂಡ ವಸ್ತುವಾ??!!...
       ಮಳೆಗೆ ಕನಸನ್ನ ಕೊಚ್ಚಿಕೊಂಡು ಹೋಗುವ ಶಕ್ತಿ ಇದೆ...ಅದೇ ಮಳೆ ಹೊಸ ಹುಟ್ಟಿಗೂ ಕಾರಣವಾಗುತ್ತದೆ... ಕಣ್ಣೀರಿನಿಂದ ತೊಯ್ದ ಹೃದಯ ಹೊಸ ಬೆಳಕಿಗೆ ದಾರಿ ಮಾಡೊಕೊಡುವುದೋ???!! ... ಇವತ್ತಿಗೆ ೧೪ ಮಳೆಗಾಲ ಕಳೆದಿತ್ತು...ಆದರೆ ಕಣ್ಣೀರಿನ ಬಿಸಿ ಇನ್ನೂ ನಿನ್ನೆ ಅನ್ನಿಸುವಷ್ಟು ಬಲವಾಗಿತ್ತು... ಕನಸುಗಳು ಹುಟ್ಟಲು ಹೆದರಿತ್ತೋ...ಇಲ್ಲ ಹುಟ್ಟಲೂ ಆಗದಷ್ಟು ಬಿಸಿ ಹೃದಯದಲ್ಲಿ ಇನ್ನೂ ಉಳಿದಿತ್ತೋ.... ಅಂತೂ ಕನಸುಗಳಿಗೆ ಹೊಸತನವಿಲ್ಲ, ಚೈತನ್ಯವಿಲ್ಲ... ಬಣ್ಣಗಳೂ ಇಲ್ಲ... ಮಳೆಯ ನೀರು ಮಾತ್ರ ನಿರಂತರ, ಅದಕ್ಕೆ ತನ್ನದೇ ಗುಂಗು... ತಪತಪನೆ ಹಿಂದೆಯಿಂದ, ಮುಂದೆಯಿಂದ...ಮೇಲಿಂದ ಬೀಳುವಾಗ ದೂರದಲ್ಲಿ ಬಿದ್ದರೆ ನೋಡಲು ಚಂದ... ಮೈ ಮೇಲೆ ಬಿದ್ದರೆ, ಮನದ ಆ ಹೊತ್ತಿನ ಬಾವದಂತೆ...ಖುಷಿ...ರೇಜಿಗ...ತಂಪು...ನಡುಕ....
       ಹೊಸ ಹುಟ್ಟು ಮಳೆಯಲ್ಲಿ...ಹಳೆ ನೆನಪು ಮಳೆಯಲ್ಲಿ... ಕಣ್ಣೀರ ಧಾರೆ ಮಳೆಯಲ್ಲಿ...ಕೌತುಕದ ಕಣ್ಣು ಮಳೆಯಲ್ಲಿ. ಜೀವನದಿಗೂ ಬೇಕು ಮಳೆ... ಋತುವಿನ ಅಂತರಕ್ಕೂ ಮಳೆಯೇ... ಬಿಸಿಲ ಬೇಗೆ ಮತ್ತು ತಣ್ಣನೆಯ ತಂಪಿನ ನಡುವೆ ಇರುವುದು ಬೋರೆಂದು ಸುರಿವ ಮಳೆ... ಆದರೂ ಮಳೆ ಕೆಲವೊಮ್ಮೆ ಕಿರಿಕಿರಿ.... ಬೇಕೆನಿಸುವ ಮಳೆ ರಾತ್ರಿಗಷ್ಟೇ ಸ್ಥೀಮಿತವಾಗಬಾರದೇ ಎಂಬ ಹರಕೆ..ರಾತ್ರಿಯ ಕತ್ತಲಲ್ಲಿ ಕರಗಿ ಹೋಗಲಿ...ಹಗಲಾದರೂ ನನ್ನದಾಗಲಿ ಎಂಬ ತವಕ.... ಹಗಲಲ್ಲಿ ಮಳೆ ಬಂದಾಗ ನೆನಪುಗಳು...ಮುನಿಸುಗಳು...ಕೊಚ್ಚಿಹೋಗತ್ತದೆ. ಗೊತ್ತು ನೆನಪುಗಳು ಕೊಚ್ಚಿಹೋದಾಗಷ್ಟೇ ಹೊಸ ಕನಸು ಮೂಡಲು ಸಾಧ್ಯ ಅಂತ....ಕನಸ ಆಸೆ ನೆನಪ ಆಸೆಯನ್ನ ಕೊಲ್ಲಲಾರದೆ???!...
       ಮಳೆಯ ಬದುಕು ಬೇಕೆನಗೆ... ಹೃದಯದ ಕಣ್ಣೀರ ಅಳಿಸಲು ...ಮೋಡಗಳು ಕಪ್ಪಾಗೋದು ಮನಸ್ಸಿನ ಕಹಿಯ ಹೀರಿನಾ???!! ಅಂತೂ ಮಳೆಗಾಲದಲ್ಲಿ ಕಾದ ಮನಸ್ಸಿಗೆ ತಂಪು...ನೆನಪಿನ ಮಳೆಯಿಂದನೋ... ಕನಸಿನ ಸ್ಪೋಟದಿಂದನೋ.... ಮಳೆಯ ಬದುಕು ಬೇಕೆನಗೆ....
   

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...