Thursday, 27 July 2017

Baduka mithi sakenisida krishne.... Baduka nadesuva krishnanondige (ಬದುಕ ಮಿತಿ ಸಾಕೆನಿಸಿದ ಕೃಷ್ಣೆ... ಬದುಕ ನಡೆಸುವ ಕೃಷ್ಣ ನೊಂದಿಗೆ)

ಕನಸುಗಳು ಕರಕಲಾಗಿದೆ ಗೆಳೆಯ, ಈಗ ಬೇಕೆನಿಸುವುದು...ಪಕ್ಕದಲ್ಲಿದ್ದವರ ಆಹಾ ಕಾರ ಮಾತ್ರ ಎಂದಳು ಇಂದಿನ ದ್ರೌಪದಿ.

 ಸಂವೇದನೆಗಳನ್ನು ಹೆಣ್ಣಾಗಿ ನೀನೇ ಕಳೆದುಕೊಂಡರೆಂತು? ಜಡವಾಗಬೇಡ. ಜಗದ ಗೊಡವೆಗೆ ಬೆನ್ನು ಹಾಕಿದರೆ ನಾವು ಜೊತೆಯಾದ ಸಂಭ್ರಮಕ್ಕೇನು ಸುಖವಿದೆ? ಎಂಬುದು ಆಕೆಯ ಯಾವತ್ತೂ ಸ್ನೇಹಿತ ಕೃಷ್ಣ ಉವಾಚ.

ಸಂವೇದನೆಗಳಿಗೂ ಹೆಣ್ಣು ಗಂಡೆಂಬ ಭೇದವೇ ಕೃಷ್ಣ??

"ಸಹಜ ಕಣೇ..ನಿನಗೆ ಬೇಸರವಾಗಿದೆ ನಿಜ... ಆದರೆ, ಮಗುವಿನ ನವಿರು ಹೆಣ್ಣು ಅನುಭವಿಸಿದಷ್ಟು ಉತ್ಕಟವಾಗಿ ಗಂಡನ್ನು ಸೋಂಕೀತೆ? ಸ್ಪಲ್ಪ ಯೋಚಿಸು... ನೀನು ಬೆನ್ನು ಹಾಕಿ ನಡೆದರೆ ಸೃಷ್ಟಿಗೆಲ್ಲಿ ಕನಸಿದೆ ಗೆಳತಿ???!!" ಕೃಷ್ಣನಿಗೆ ಜಗ ನಡೆಸಬೇಕು.. ದ್ರೌಪದಿ ಇಲ್ಲದ ಮನುಕುಲ ಆತನ ಮನಸ್ಸಿಗೆ ಬಾರದು.

ಮಗುವಿನ ನವಿರು ಅನುಭವಿಸುವ ಅನಿವಾರ್ಯತೆ ಹೆಣ್ಣಿಗಲ್ಲವೇ..ನೀನದನ್ನ ಬೇಕೆಂದೇ ನನ್ನ ಮೇಲೆ ಹೇರಿರುವೆಯಾ ಜಗದೊಡೆಯಾ?? ದ್ರೌಪದಿಯ ಪ್ರಶ್ನೆ ಸಮಯೋಚಿತ

ಇಲ್ಲ ದ್ರುಪದ ಕುವರಿ ನಿನ್ನದು ಬಹಳ ದೊಡ್ಡ ಸ್ಥಿತಿ.... ಗುಣಮಟ್ಟದ ಮನುಷ್ಯರ ಯಾದಿಯಲ್ಲಿ ನಿನ್ನ ಹೆಸರಿದೆ. ಸ್ವಹಿತವನ್ನು ಮೀರಿ ನೆರೆಹೊರೆ ನಿನ್ನಿರವನ್ನು ಬೇಡುತ್ತದೆ. ನಿನ್ನ ಸಂವೇದನವಿಲ್ಲದೆ ನಾವು ಉಸಿರಾಡಲೂ ಸಾಧ್ಯವಿಲ್ಲ ಕಣೇ... ಕೃಷ್ಣನಿಗೆ ಪ್ರೇಯಸಿಯರ ಸಾಲೇ ಇದ್ದರೂ ಕೃಷ್ಣೆ ಇಲ್ಲದೆ ಆತ ಯೋಜನೆಗಳ ಯೋಚಿಸಲಾರ.

ತಾನಿನ್ನೂ ಬದುಕ್ಕಿದ್ದೇನೆ ಎಂದು ನೀರೂಪಿಸಲು ಬೇಕು ಹೆಣ್ಣಾದ ನನಗೆ ಮಗುವೆಂಬ ಕವಚ....ಅದ್ದಕ್ಕಲ್ಲವೇ ಪ್ರತಿ ಹೆಣ್ಣು ಮಗುವನ್ನ ಪುರ್ಣ ನವಿರಾಗಿ ಅನುಭವಿಸುವುದು

ಕೃಷ್ಣ ಬಹಳ ಬುದ್ದಿವಂತ..ಅದಕ್ಕೆ ಅವನು ಸೋಲುತ್ತಾನೆ.... "ಹೋಗಲಿ ಬಿಡು. ನಾನೇ ಪಟ್ಟು ಸಡಿಲುಸುತ್ತೇನೆ ಅಥವಾ ನೀನೆ ಸಡಿಲಿಸಿದೆ ಎಂದು ಬೀಗು. ನಾಳೆ ತರಾತುರಿಯಲ್ಲಿ ಸೀರೆ ನೆರಿಗೆ ಸಿಕ್ಕಿಸಿಕೊಳ್ಳುವಾಗ ನನ್ನನೊಂಚೂರು ನೆನಪಿಸಿಕೊಳ್ಳೆಯಾ? ನಿನ್ನ ಸೀರೆಗೂ ನನಗೂ ನಂಟುಂಟು ಗೆಳತಿ..‌"

ಸೀರೆಗೆ ನೆರಿಗೆ ಹಾಕುವಾಗ ನೆನಪಾಗುವುದು, ಸೀರೆ ಜಗ್ಗಿ ತನ್ನಡೆ ಸೆಳೆದ ಪುಟ್ಟ ಕಂದಮ್ಮ...ನಾನೂ ಎಲ್ಲರಂತೆ...ದೇವರಾಗಬಯಸುತ್ತೇನೆ... ಅದಕ್ಕೆ ಎಡೆ ಮಾಡಿದ್ದು ನನ್ನ ಆ ಕಂದಮ್ಮ ನೀನಲ್ಲ... ನೀನು ನನ್ನ ದೀನಳಾಗಿಸಿದೆ ಜಗದೊಡೆಯ.. ಅದಕ್ಕೇ ನನ್ನ ಮನಸ್ಸ ತುಂಬಾ ನನ್ನ ದೇವರಾಗಿಸಿದ ಕಂದಮ್ಮ ತುಂಬಿರುತ್ತದೆ ..‌ ಅನ್ನುತ್ತಾಳೆ ಇಂದಿನ ದ್ರೌಪದಿ. ಗಂಡಸು ಯಾರೇ ಆದರೂ, ಯಾಕೇ ಆದರೂ,  ಪಟ್ಟು ಸಡಲಿಸಿದಾಗ ಸಿಗುವುದು .. ಇನ್ನೂ ಬದುಕಬೇಕೆಂಬ ತುಡಿತವಲ್ಲ.‌..ಮುಗಿದು ಹೋಗಲಿ ಎಂಬ ಹತಾಶೆ..

 ದ್ರೌಪದಿಯ ಹತಾಶೆ ಸಹಿಸದಾದ ಜಗದೊಡೆಯ‌.‌‌ ಅನ್ನುತ್ತಾನೆ ಆತ, ನಾನೂ ಮಗುವಾಗುತ್ತೇನೆ. ನೀನು ಹೊರದೆ, ಹೆರದೆ. ಆದರೆ ನೀನು ನನ್ನ ತೊದಲನ್ನೇ ‌‌ಅರ್ಥೈಸಿಕೊಳ್ಳುತ್ತಿಲ್ಲವಲ್ಲ ಗೆಳತಿ...

"ಇದೇ ನೋಡು..ಹೆಣ್ಣಿನ ಸಂಕಟ, ಪ್ರತಿಯೊಬ್ಬರೂ ಆಕೆಯಲ್ಲಿ ಮಗುವಾಗ ಬಯಸುತ್ತಾರೆ...ಆದರೆ..ನನ್ನ ಕಂದಮ್ಮನಂತೆ..ನನ್ನಲ್ಲಿ ಬೆಳೆದು...ನನ್ನ ಬೆಳೆಸುವುದಿಲ್ಲ...ತೊದಲ ಆಡುತ್ತಾ ನನ್ನ ಮಾತನ್ನ ಕಸಿಯಲಷ್ಟಕ್ಕೇ ಗಂಡಸರ ಮಗುತನ ಮೀಸಲು. ನಾನು ಎತ್ತಹೋದರೇನು!! ಸಾಕಾಗಿದೆ ಕೃಷ್ಣ, ನನ್ಯಾಕೆ ಬದುಕಾದೆ..ನಾನ್ಯಾಕೆ ಹೆಣ್ಣಾದೆ ಅನ್ನಿಸುವಷ್ಟು....ಕಾಡುತ್ತವೆ ಈ ತೊದಲುಗಳು ನನ್ನ.. ಬಿಡಿಸಯ್ಯ ನನ್ನ ಬಂಧ" ದ್ರೌಪದಿ ಕನಲಿ ಕೇಳುತ್ತಾಳೆ ಕೃಷ್ಣನನ್ನ.

ಏನು ಮಾಡೋಣ ಹೇಳು. ಅದು ಗಂಡಿನ ಮಿತಿ ಗೆಳತಿ. ಇವತ್ತೂ ನೀನಲಿಯುವ ಲಕ್ಷಣಗಳಿಲ್ಲ. ಹೋದ ಜೀವಗಳ ಅರೆಕ್ಷಣ ನೆನೆದು ಮನುಕುಲವನ್ನೊಮ್ಮೆ ಪ್ರಾರ್ಥಿಸೋಣ: ಸಾಯಬೇಡಿ, ಸಾವು ತಾನಾಗಿ ಬರುವವರೆಗೂ. ಕೃಷ್ಣನಿಗೆ ಬದುಕನ್ನ ಬೆಳೆಸುವ ಯೋಚನೆ ಮಾತ್ರ...‌

ಮಿತಿಗಳಿಗೆ ಮೀರಿದ ಬದುಕಿದೆ ಎಂದಾದರೆ ಮಾತ್ರ ಸಾಯಲು ಓಡಬಾರದೆಂಬ ತುಡಿತ ಸಾಧ್ಯ, ಗೆಳೆಯ...ಇಲ್ಲವಾದರೆ, ಬದುಕಿನಾಚೆಯ ಮಿತಿಯಿಲ್ಲದ ಬದುಕಿಗೇ ತುಡಿತ..ಆಗಲೆಲ್ಲ ಸಾವು ಅಪಮಾನ್ಯ. ಸಾವು ತಾನಾಗಿಯೇ ಬರುವವರೆಗಿನ ಮಿತಿಯ ಜೀವನಕ್ಕೆಲ್ಲಿ ಅರ್ಥ??. ಸಾವಲ್ಲಾದರೂ ನನ್ನತನವಿರಲಿ, ಮಿತಿ ಇಲ್ಲದಿರಲಿ ಎಂಬ ತುಡಿತ ತಪ್ಪೇ.. ದ್ರೌಪದಿ ಸೆಟೆದು ಕೇಳುತ್ತಾಳೆ ಜಗದೊಡೆಯನ್ನನ್ನ.

ಇಲ್ಲ ಕೃಷ್ಣೆ ಗಂಡಸರಲ್ಲಿ ಹೆಚ್ಚಿನವರು ಬದುಕಿಗೆ ಬೆನ್ನು ಹಾಕಿದವರು, ಬದುಕ ಓಟ್ಟಕ್ಕೆ ಹೆದರಿ ನಿನ್ನಲ್ಲಿ ಮಗುವಾಗ ಬಯಸಿದವರು. ನಾನು ಮಾತ್ರ ನೀನು ಎಂದಿಗೂ ಬೆನ್ನು ಹಾಕಿದರೂ ಅದರಲ್ಲೂ ನನಗೇನೊ ತೋರಿಸಹೊರಟಿರಬೇಕಿವಳು ಎಂದು ನಂಬಿರುವ ಆಶಾವಾದಿ. ಬದುಕ ಮನ್ನಿಸು ಹುಡುಗಿ...ನಡೆ ಮುಂದೆ..ನಡೆ ಜಗದೊಡೆಯನ ಜೊತೆ... ನೀನಲ್ಲದೆ ಇನ್ಯಾರು ಬದುಕ ಪ್ರೀತಿಸ ಬಲ್ಲರು ಕೃಷ್ಣೆ... ಬಾ ನನ್ನೊಡನೆ ಇದೆ ಆಸೆ..

ಎಳೆದು ನಡೆಯುತ್ತಾನೆ ಜಗದೊಡೆಯ....ಕೃಷ್ಣ ನಲ್ಲದೆ ಇನ್ಯಾರು ಪ್ರಿಯ ಸ್ನೇಹಿತರಿದ್ದಾರೆ?! ಹೆಣ್ಣು ಮಗಳು ಆಕೆ ದ್ರೌಪದಿ.. ಕರೆದಾಗೆಲ್ಲ ಓಗೊಟ್ಟ ಆತನ್ನನ್ನ ಬಿಟ್ಟು ನಡೆಯಲಾದೀತೆ?! ಜಗದೊಡೆಯನೊಂದಿಗೆ ಜಗಳ ಸಾಧ್ಯ.. ಆದರೆ ಕೈ ದೂಡಿ ನಡೆದರೆ ಇನ್ಯಾರು ಇರುವರು ಆಕೆಗೆ??? ನಿಟ್ಟುಸಿರಿನೊಂದಿಗೆ ಆಸೆಯ ಕನಸನ್ನ ಪುನಃ ಒಗ್ಗೂಡಿಸುತ್ತಾ ನಡೆಯುತ್ತಾಳೆ ಕೃಷ್ಣೆ, ಜಗದೊಡೆಯ ಕೃಷ್ಣ ನೊಂದಿಗೆ...‌

No comments:

Post a Comment

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...