Tuesday, 18 July 2017

ಆಶಾವಾದವೆಂಬ ಹಮ್ಮು...

ಈ ವಾರ ಬದುಕಿನ ಬಗ್ಗೆ...ಹೊರಾಟದ ಬಗ್ಗೆ ಬರೆಯೋಣ ಅಂದುಕೊಳ್ಳುತ್ತಿರುವಾಗಲೇ... ಸ್ನೇಹಿತರೊಬ್ಬರ SMS ಬಂತು "ನನ್ನ ನೆರೆಯೂರಲ್ಲಿ ಕುಟುಂಬಕ್ಕೆ ಕುಟುಂಬವೇ ತನ್ನನ್ನು ತಾನು ಕೊಂದುಕೊಂಡಿದ್ದರ ವಿಷಾದ ನನ್ನೆದೆಯಲ್ಲಿನ್ನೂ ಪಸೆಯಾರದೆ ಉಳಿದಿದೆ. ಯಾರ ಬದುಕಾದರೂ ಬದುಕಲಾರದಷ್ಟು ಕಷ್ಟವೇನೇ ಗೆಳತಿ?"
     ನನ್ನೊಳಗಿನ ಲಾವಾರಸ ಉಕ್ಕ ತೊಡಗಿತು...
     ನೆಲೆ ಸಿಗದ ಹೋರಾಟ...ಅದರ ವಿಷವೇ ಹೆಚ್ಚು ಎಲ್ಲರ ಜೀವನದಲ್ಲಿ...  ಬದುಕಲು ಬೇಕು ಎಲ್ಲರಿಗೂ ಒಂದು ಕನಸು..ಅದೇ ಗೋಜಲಾದರೆ!!!??!
      ಇತ್ತೀಚಿಗಂತೂ ಜೀವನಕ್ಕೇನು ಬೇಕು ತಿಳಿಯದ ದಡ್ಡತನ ಎಲ್ಲರಲ್ಲೂ.. ಸುಮ್ಮನೆ ಕಾಣದ ಜಿಂಕೆಯ ಹಿಂದೆ ಎಲ್ಲರ ಓಟ, ಯಾವ ಸೀತೆಯ ಆಸೆಗೆ ಯಾವ ರಾಮನ ಹೋರಾಟವೋ ಒಂದೂ ತಿಳಿಯದು ??
      ಬದುಕಿನ ಸಿಕ್ಕು ಸಿಕ್ಕಾದ ದಾರದುಂಡೆಗೆ ಬೇಕು ಸಂತೋಷವೆಂಬ ಬೆರಳುಗಳ ಮಾಂತ್ರಿಕ ಸ್ಪರ್ಶ ಹಾಗು ಅದರಿಂದ ಒಂದು ಸುಂದರ ಕಸೂತಿಯಾಗಬೇಕು...ಇವೆಲ್ಲ ಬೆಳಗು ಹರಿಯುವುದರೊಳಗೆ ಆದೀತೆ‌??....ಖಂಡಿತ ಇಲ್ಲ... ಕಸೂತಿ ಆಗಲು ಕಾದಂತೆ ಕಾಯಬೇಕು ನಾಳೆಗಳ ಸೌಂದರ್ಯದ ನಿರೀಕ್ಷೆಯಲ್ಲಿ....
         ಆದರೆ ನಾವೀಗ ಜಡವಾಗಿದ್ದೇವೆ ಯಾರ ಸಾವೂ ಕಲಕಲಾರದಷ್ಟು..... ಯಾರ ಕೂಗೂ ಯಾರಿಗೂ ಕೇಳದು... ಅದೆಲ್ಲೋ ಪರ..ಪರ, ಶಬ್ದದ ನಡುವೆ ಹಸಿ ಬಿಸಿ ನೋಟುಗಳದೇ ಅಟ್ಟಹಾಸ. ಪ್ರತಿಯೊಬ್ಬರಿಗೂ ಬರೀ ನಾನು, ನಾನೆಂಬ ತುಡಿತ....ಬೇಕು ಬೇಕೆಂಬ ಕಾಮನೆಗಳು
        ಇವೆಲ್ಲದರ ಮಧ್ಯೆ ಕಾಣದಾದದ್ದು.. ಕೇಳದಾದದ್ದು..ಮಾತ್ರ ನಮ್ಮವರ ಕನಸುಗಳು, ಕರಕಲಾದ ನೋಟ..ನೋವು.‌ ಹೊಸ ಕನಸಿನ ಆಸೆಗೆ, ಕೇಳಿಸಿದ್ದು ಪಕ್ಕದಲ್ಲಿದ್ದವರ ಆಹಾಕಾರಗಳು ಮಾತ್ರ... ನಾಳೆಗಳ ಸೌಂದರ್ಯ ಇವತ್ತಿನ ಬೇಕುಗಳ ಮಧ್ಯೆ ಕಾಣೆಯಾಗಿದೆ
         ಜಗದ ಗೊಡವೆಗಳೆಲ್ಲ ಮನುಷ್ಯನ ಸ್ವಂತ ವಿಕೃತಿಗಳಿಂದಲ್ಲವೇ...ಪ್ರತಿ ಮನೆ ಸರಿಯಾದರೆ, ಜಗದ ಗೊಡವೆ ಯಾರಿಗೆ ಬೇಕು?? ನನ್ನ ಮನೆಯ ಗೋಜಲಗಳಿಗೆ ಉತ್ತರ ಹುಡುಕಲು ಸಮಯವಿಲ್ಲ....ಸಮಾಜಕ್ಕೆ ಮುಖ ಮಾಡಿ ದೊಡ್ಡವರೆನಿಸಿಕೊಳ್ಳುವ ಹಂಬಲ...
           ಸ್ವಹಿತ ಮರೆತ ರಾಕ್ಷಸರೊಂದಿಗಲ್ಲವೇ ಇಂದು ಜಗದೊಡೆಯ ಜಗಳಕ್ಕಿಳಿಯಬೆಕ್ಕಾದ್ದು. ಮನುಷ್ಯ ತನ್ನಲ್ಲಿ ಕಾಣದ ಸುಖ ಬೇರೆಯವರಲ್ಲೂ ಇರಬಾರದೆಂದಲ್ಲವೇ ರಾಕ್ಷಸನಾಗ ತೊಡಗಿದ್ದು...
           ‌ಅಲ್ಲೆಲ್ಲೋ ದೂರದ ಊರಿನ ರಾಜಕೀಯಕ್ಕೆ ತನ್ನ ಮನೆ ಬಿಟ್ಟು, ತನ್ನ ಕನಸನ್ನ ಮಾರಿ ಹೊರಟ ಜನರಿರುವ,....ಬರೀ "ನಾನೇ ನಾನು" ಎಂದೆಣಸಿಕೊಳ್ಳಲು, ಇಸಂಗಳ ದಾಸರಾದ ಜಂಗುಳಿಯಲ್ಲಿ...ಬದುಕು ಸಹ್ಯವಾಗುವುದೆಂತು??...ನಿಜ ಪ್ರೀತಿ, ಕನಸು, ಸಂತೋಷ ಹುಟ್ಟುವುದೆಂತು???..ಅದಕ್ಕಲ್ಲವೇ ಇಂದಿನ ಪ್ರತಿಯೊಬ್ಬರಿಗೂ ಬದುಕು ಸಲಭವಾಗದೆ, ಖಷಿಯಾಗದೆ..ಬದುಕಬೇಕಾದ ದುಸ್ತರವಾಗಿರುವುದು...
           "ನನಗೆ ಯಾವೂರ ದಾಸಯ್ಯನೂ ಬೇಡ...ನನ್ನ ಮಗುವಿಗೆ ಹೊಟ್ಟೆ ತುಂಬಲು ಒಂದಿಷ್ಟು ಧಾನ್ಯ... ನನ್ನ ಕನಸಿಗೆ ಖುಷಿ ಕೊಡಲು ಒಂದಷ್ಟು ಹಾಡು....ಇಷ್ಟು ಕೊಡು ದೇವ‌ ನಿನ್ನೂರಿನಲ್ಲಿ...‌ ಆದರೆ ಇವ್ಯಾವವೂ ಬೇಡವೆಂಬಂತೆ ಕೆಂಪು, ಕೇಸರಿ, ಹಸಿರೆಂಬ ಬಣ್ಣಗಳಿಗೆ ಜಗಳವಾಡುವ ನನ್ನೂರಿನ ಈ ಜಂಗುಳಿಗಿಂತ... ಕಾಣದ ಕತ್ತಲೆಯೇ ಒಳಿತು ದೇವ" ಎಂದು ಪ್ರಾರ್ಥಿಸಿರಬಹುದೇ ಸಾವಿನಂಚಿಗೆ ನಡೆದ ನೆರೆಯೂರ ಕುಟುಂಬ.
      ಆಸೆಗೂ ಆಶಾವಾದಕ್ಕೂ ಅಜಗಜಾಂತರ ವತ್ಯಾಸ ....ಚೆಂದದ ಬದುಕಿಗೆ ಇರಬೇಕ್ಕಾದ್ದು  ಹಾಡುವಾಸೆ...ಆದರೆ ಇಂದಿನ ಜನರಿಗಿರುವುದು....ಆಶಾವಾದ ಎಂಬ  ಹಮ್ಮು.!!!!

ಬರೆಯಲು ವಸ್ತು ಸಿತ್ಥಿಯನ್ನ ನನ್ನೊಳಗೆ ಪರಿಚಯಿಸಿದ ಸ್ನೇಹಿತರಿಗೆ ಅರ್ಪಣೆ.

No comments:

Post a Comment

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...