Sunday, 11 June 2017

Maleya munisu......ಮಳೆಯ ಮುನಿಸು

ಮಳೆ ಬಂತು, ಜೊತೆಗೆ ತಂತು ಅವರಿಬ್ಬರಲ್ಲಿ ಮುನಿಸು... ಹೆಣ್ಣು ಹೆಣ್ಣಾಗಿರಲು, ನಾನಿರಬೇಡವೇ? ಕೇಳಿದ ಆತ. ಯಾಕೋ ಅಲ್ಲೇ ಮುನಿಸಾದಳು ನಮ್ಮ ಪುಟ್ಟಿ...

ಎದೆ ಗಾಯದ ಮೇಲೆ ಸುರಿಯೆ ನೀ ಮಳೆಯಾಗಿ...ಆಕೆ ಇಲ್ಲದೆ ಅದ್ಹೇಗೆ ಆತ ಮಳೆಯನ್ನ ಬರಮಾಡಿಕೊಂಡಾನು!

ಆಕೆಗೋ ಮುನಿಸು ಮೂಗು ಕೆಂಪಾಗಿಸುವಷ್ಟು.... ಗಾಯಕ್ಕೆ ಸುರಿದ ಮಳೆ ಎದೆಯನ್ನೇ ಗೋರಿಯಾಗಿಸೀತು ಜೋಕೆ!!!!

ಮಳೆಗಾಲದಲ್ಲೂ ಚಿಗುರುವ ಮಾತಾಡದ ನೀನೆಷ್ಟು ನಿಷ್ಕರುಣಿ...ಆತನ ಮಾತು ತುಂಬಾ ಭಾರ...

ಚಿಗುರಲು ಬೇಕಾ ಹ್ಯೊಯುವ ಮಳೆ?!?!.. ಕಾದ ನೆಲದಲ್ಲೆಲ್ಲ..ಬರೀ ಮುಳ್ಳು... ..ಮುನಿಸಷ್ಟೇ ಅಲ್ಲ ಆಕೆಯ ಮನದಲ್ಲೇನೋ ಕೊರಗು, ತಿಳಿಯಲ್ಲೊಲ್ಲ ಯಾಕೆ ಅಂತ ಸಿಡಿಮಿಡಿ..

ಪಾಪ..ಆತನೇನು ಸರ್ವಜ್ಞನೇ?...ಆಕೆಯ ಕೊರಗು ಕಾಣಿಸಲ್ಲಿಲ್ಲ...‌ ಬರೀ ಸಿಡಿಮಿಡಿಗೆ, ತಮಾಷೆ ಆತನದು... "ಮುಳ್ಳು ಬೇಲಿಯ ತಬ್ಬಿ ಚಿಗುರು ಹಬ್ಬಿ ನಗಬಾರದೆ? ನೀನಂತೂ ನೀರು ಹನಿಸಲೊಲ್ಲೆ
ಮಳೆಯಾದರೂ ಮುಳ್ಳ ಚಿಗುರಿಸಲಿ ಬಿಡು".. ಇಲ್ಲ ಆತ ಆಕೆಯನ್ನ ಇನ್ನೇನೋ ಕೇಳುತ್ತಿದ್ದಾನೆ

ಪುಟ್ಟಿ ಬೆಳೆದು ಬಿಟ್ಟಿದ್ದಾಳೆ...ಮುಗ್ದತೆಯ ಮೀರಿ ವಾಸ್ತವತೆ ಅಕೆಯನ್ನ ಕಠೋರವಾಗಿಸಿದೆ...ಅನ್ನುತ್ತಾಳೆ " ಮಳೆಗೆ ಕರುಣೆ ಉಂಟೆ?!.. ಸಿಡಿಲಬ್ಬರ...ಗುಡುಗುಗಳ ಮಧ್ಯೆ... ಸುರಿವ ಮಳೆಗೆ ಮುಳ್ಳೊಂದು ಲೆಕ್ಕವೇ
ತನ್ನ ತಾನು ಕಾಪಾಡಿಕೊಂಡರೆ..ಮುಳ್ಳಿಗುಂಟು ಚಿಗುರುವ ಭಾಗ್ಯ"

ಪ್ರೀತಿ ಆತ್ಮ ಗೌರವವನ್ನು ಕೊಲ್ಲುತ್ತದೆ ಕಣೆ, ಹಸಿವಿನ ಹಾಗೆ:
ಸ್ವಭಾವತ ಮುಳ್ಳೇ ಆದರೂ ಆಸೆಯ ಬೆನ್ನು ಬಿದ್ದು ಸ್ವಭಾವ ಮರೆತಿದೆ..... ಈಗವನಿಗೆ ಅವಳ ನೋವು ಅರ್ಥವಾದಂದಂತಿದೆ, ಸಂತೈಸಲು ಬೆನ್ನ ಮೇಲೆ ಕೈ ..ಮಾತಿನಲ್ಲಿ ಅಕ್ಕರೆ

ಆಸೆಗೂ ಮಿತಿ.. ಮುಳ್ಳಿಗೂ ಹುಟ್ಟು ಗುಣ..ಮಳೆ ನಿರಂತರವಾದಾಗಲೇ ಎಲ್ಲಾ ಬದಲಾವಣೆ.... ಕರಗುತ್ತಿದೆಯೇ ಆಕೆಯ ಎದೆಯ ನೋವು..ಇಲ್ಲ ಎಲ್ಲಾ ಇನ್ನೂ ಗೋಜಲೇ??

ನೀನು ಬದಲಾಗಬಹುದೆಂಬ ನಿರೀಕ್ಷೆ ಈ ಮಳೆಗಾಲದಲ್ಲೂ ಚಿಗುರುತ್ತಿಲ್ಲ
ಬದಲಿಗೆ ಬೇರೆ ಯಾರನ್ನೊ ಹುಡುಕಿಕೊಳ್ಳೋಣವೆಂದರೆ ಈ ಮಳೆಯೂ ನಿಲ್ಲುತ್ತಿಲ್ಲ!.... ಆತನದು ತಮಾಷೆಯೋ, ಕುಹುಕವೋ ಇಲ್ಲ ತನ್ನವಳಾಗದ ಆಕೆಯ ಮೇಲೆ ಮುನಿಸೋ...ಆತನಿಗೇ ತಿಳಿಯದು

 ಬದಲಾವಣೆಗೆ... ಮಳೆ ನಿಲ್ಲುವ ಕಾಲ ಬರಬೇಕು... ಆಗ ಹಸಿರೆಲೆ ಒಣಗೀತು... ಮಳೆಗಾಲದಲ್ಲಿ ಇಡೀ ನೋಟ ಒಂದೇ..ನಾನು..ಅವಳು.. ಎಲ್ಲಾ ಧೋ ಅಂತ ಸುರಿಯುತ್ತಲೇ ಇರುವೆವು..... ಪುಟ್ಟಿ ಕಳೇದೇ ಹೋಗಿದ್ದಾಳೆ..ಇಲ್ಲ ಇದು ಬರೀದೆ ಮುನಿಸಲ್ಲ, ಕನಸೆಲ್ಲೋ ಒಡೆದು ಹೋಗಿದೆ..ಇಂತಹ ತತ್ವಜ್ಞಾನದ ಮಾತು, ಪುಟ್ಟಿಯ ಬರೀ ಪ್ರೀತಿಯಿಂದ ಹುಟ್ಟಲು ಸಾಧ್ಯವೇ

"ನೀನು ಹೇಳುವುದೂ ನಿಜ. ನೀವಿಬ್ಬರು ಸುರಿಯುವ ರಭಸಕ್ಕೆ ಒಡ್ಡಿದ ಬೊಗಸೆಗೂ ನೋವು. ಮಳೆ ನೋಯಿಸಬಾರದಲ್ಲ, ಹುಡುಗಿ
ಮಳೆ ಮತ್ತು ನೀನು ಸುರಿದರೆ ಖುಷಿ.......
ಸುರಿಯುತ್ತಲೇ ಇದ್ದರೆ ಆತಂಕ......
ಸ್ರಷ್ಟಿಸಬಹುದಾದ ಅನಾಹುತಗಳ ನೆನೆದು,"..... ಹುಡಗನಲ್ಲೀಗ ಆತಂಕ, ಪ್ರೀತಿಗೂ ಮೀರಿ ತಾನೇನು ಮಾಡಲಿ ಎಂದು, ಗೊತ್ತವನಿಗೆ... ಮುನಿಸಿನ ಹಿಂದೆ ಇದೆ ನೋವು...ಕೇಳಲು ಭಯ...ಹೆಣ್ಣು ಅರಗಿಸಿಕೊಂಡಂತೆ ಗಂಡಿಗೆ ಆದೀತೆ...ಗಟ್ಟಿ ಗುಂಡಿಗೆ ಆದರೂ ಅರಗಿಸಿಕೊಳ್ಳಲು ಬೇಕು ಹೆಣ್ತನ...

ಅವನ ಮೇಲ್ಲಲ್ಲ ಆಕೆಯ ಕೋಪ...ಆಕೆಗೋ ಹಣ್ತನದ ಭಾರ...ಅದಕ್ಕನ್ನುತ್ತಾಳೆ ಆಕೆ........" ಅದಕ್ಕಲ್ಲವೇ ಮುಂಗಾರಿಗೂ ಒಂದು ಲಯ...ಒಂದು ಮಿತಿ, ನನ್ನ ಓಘಕ್ಕೂ ಸಾಕಾಗುವ ಗುತ್ತು.. ನಾನು ಮುಖ ತಿರುಗಿಸಿ ನಡೆದರೆ...ಅದಕ್ಕೂ ಕಾರಣ ಮಿತಿ"

 ಮುಂಗಾರೆ ಈ ಋತುವಲ್ಲಿ ಮಿತಿಯಾಗಬೇಡ
ನಿನ್ನನ್ನೇ ನಂಬಿ ಕನಸುಗಳನ್ನು ಬಿತ್ತಿದ್ದೇನೆ.... ಆತ ಪುನಃ ಆತನಾಗ ಹೊರಟ... ಗೋಗರೆದರೆ ಕೇಳದ ಹೆಣ್ಣುಂಟೆ?!?

ಮುಂಗಾರಿಗೆ ಮಿತಿ ಇಲ್ಲ..ಓಘಕ್ಕೆ ಮಿತಿ ಇದೆ.. ಮುಂಗಾರು  ಮಿತಿಯಾದರೆ..ಕಾರಣ ನೀನಲ್ಲವೇ..ಕನಸು ಬಿತ್ತೀದ್ದಿಯಾ!... ನೆನಪುಗಳ ಕಡಿದ್ದದ್ದು ಮರೆತೇ ಹೋಯಿತೇ ನಿನಗೆ!!... ಆಕೆಯ ಕೋಪ ಈಗ ಹೊರ ಬಂತು..ಅದು ಬರೀ ಮುನಿಸಲ್ಲ

ಓ ನೀನಿನ್ನೂ ಅದನ್ನೆಲ್ಲ ಮರೆತಿಲ್ಲವೇ? ಇಷ್ಟೆಲ್ಲ ಮಳೆ ಸುರಿದರೂ ಅದ್ಯಾಕೆ ನೆನೆದು ಅಳಿಸಿ ಹೋಗಿಲ್ಲ?.. ಊಹುಃ ಆತ ಆದ್ರನಾಗಿರಲ್ಲಿಲ್ಲ.. ಈಗ ಬಂತವನ ಸೆಡವಿನ ಮಾತು.

ಪುಟ್ಟಿ ಹೆಣ್ಣಾಗಿ ಬೆಳದಾಯಿತು....ಅದರ ಮೇಲೆ ಮುಗ್ದತೆ ಹುಡುಕಲಾದೀತೆ??......." ಮಳೆಯ ಧೋ ನನ್ನ ಮನಸ ಹಸಿಯಾಗಿಸೀತು.. ಆ ಹಸಿಬಿಸಿಯಲ್ಲಿ..ಕಾರಣಗಳು ಮರೆತು ಹೋದಾವು.. ಆದರೆ ಹೃದಯಕ್ಕೆ ಹಸಿಯಾಗುವ, ನೆನೆವ ಪುಣ್ಯ ಎಲ್ಲಿ??...ಅದ್ಯವಾಗಲೂ ಬಿಸಿಯೇ.. ನೆನಪ ಬಿಸಿ..ಹೃದಯದಲ್ಲಿ‌.. ಕನಸ ಹಸಿ ಮನದಲ್ಲಿ"

ಇಷ್ಟೆಲ್ಲ ಮುನಿಸಿನ ಮಧ್ಯೆ..ಗಂಡಲ್ಲವೇ ಆತ.. ತುಂಟತನ ಸಹಜ ಆತನಿಗೆ...ಅನ್ನುತ್ತಾನೆ‌.." ಹಸಿ ಹಸಿ ಬಯಕೆಗಳು ಮಳೆಗೆ ಮೊಳೆಯುತ್ತಿವೆ ನನ್ನೊಳಗೂ. ನೀ ಸ್ಪಂದಿಸುವುದಿಲ್ಲವೆಂಬ ಖಾತರಿಯಿಂದ ಅದುಮಿಟ್ಟಿದ್ದೇನೆ ಒಳಗೇ"..

ಯಾಕದು?! ಸುರಿವ ಮಳೆಯ ಮಧ್ಯೆ ಕಳೆದು ಹೋದೀತೆಂಬ ಭಯವೇ?.. ಸ್ಪಂದನ ಬರೀ ಅರಿವಿನಿಂದಾದೀತೆ? ಅದಕ್ಕೆ ಬೇಕು...ಹುಚ್ಚು ಆವೇಶ.. ಕನಸ ಬಿತ್ತುವವರಲ್ಲೆಲ್ಲಿ ಅದು?!?!... ಆವೇಶ ಯಾವತ್ತೂ ಕನಸ ಹಾರಾಡಿಸುವ ಹೆಣ್ಣಿನಲ್ಲಿ...
ಅದಕ್ಕೇ ಅವಳು ಆವೇಶ...ಅವಳು ಪೃಕೃತಿ!!!!.......‌ ಪುಟ್ಟಿ ಗುಡುಗು ಸಿಡಿಲಿನೊಂದಿಗೆ ಭೋರ್ಗರೆಯುತ್ತಾಳೆ...ಕಣ್ಣು ಮೂಗೆಲ್ಲ ಕೆಂಪು.,..ಹನಿಗಳ ಆರ್ಭಟ...

ನಿನ್ನೊಲುಮೆಯಾಗಸದಲ್ಲಿ ಮಳೆ ಬಿಲ್ಲೊಂದನ್ನು ಮೂಡಿಸುವ ನನ್ನಾಸೆ ಕನಸಾಗಿಯೆ ಉಳಿಯಿತು. ಸೋಲುವುದರಲ್ಲೂ ಸುಖವಿದೆ.
ಮಳೆಗೊ ಹಲವು ಮುಖವಿದೆ...  ಎಷ್ಟಾದರೂ ಆತ ಪುರಷ, ಪೃಕೃತಿ ಎದುರು ನಿಲ್ಲಲ್ಲುಂಟೇ...ಎಷ್ಟೇ ಸೆಡವಿದ್ದರೂ, ಪುರುಷನದೇ ಸೋಲು, ಪೃಕೃತಿಯದೇ ಗೆಲುವು....

ಪುಟ್ಟಿ ಪೃಕೃತಿಯಾದರೇನು ...ಕನಸಾದರೇನು..ಚಿಟ್ಟೆಯಾದರೇನು...ಹುಟ್ಟಿನಿಂದ ಬಂದ ತಾಯ್ತನ ಬಿಟ್ಟು ಹೋದೀತಾ??!... ಎಲ್ಲದನ್ನ ಎಲ್ಲರನ್ನ ತನ್ನೊಳೆಗೇ ಒಯ್ದು ಕರಗುವ ಆಕೆ..‌ಅನ್ನುತ್ತಾಳೆ...... "ಬಿತ್ತಿದ ಕನಸು ಉತ್ತ ಮೇಲೆ ಮಳೆಬಿಲ್ಲು ತಾನಾಗಿಯೇ ಮೂಡೀತು... ಸೋಲು ಗೆಲುವು ಮಳೆಯ ಮುಖಗಳೇ".

ಹೊರಗೆ ಧೋ ಎಂದು ಸುರಿಯುವ ಮಳೆ... ಒಳಗಿನ ಮಳೆಯೂ ಸುರೀದೀತು.... ಮನಸ ದುಗುಡಗಳು ಮೋಡದಂತೆ ಕರಗಿ ಮಳೆಗಾಲ ಮುಗಿಯುವುದರ ಆಚೆ ಈಚೆ, ಹೃದಯ ಆಕಾಶದಂತೆ ತಿಳಿಯಾದೀತು.... ಪುಟ್ಟಿಯ ಕಣ್ಣಿನಲ್ಲೂ ನಗು ಕಂಡೀತು.... ಬಾ ಮಳೆ ಬಾ, ಪುಟ್ಟಿ ಮನದಲ್ಲಿ ಚಿಗುರು ಮೊಳೆಕೆಯೊಡಯಲಿ.... ಅವಳೇ ಪೃಕೃತಿ ಪುರುಷನಲ್ಲಿ ಚಿಗುರು... ಸಂಸಾರದಲ್ಲಿ ಚಿಗುರು ಅವಳಿಂದಲೇ... ಬಾ ಮಳೆ ಬಾ

No comments:

Post a Comment

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...